ಗಯಾ

ಬಿಹಾರ ರಾಜ್ಯದ ಪಾಟ್ನ ವಿಭಾಗದ ಒಂದು ನಗರ. ಅದೇ ಹೆಸರಿನ ಜಿಲ್ಲೆಯ ಕೇಂದ್ರ. ಉ.ಅ. 240 49 ಮತ್ತು ಪೂ,ರೇ. 850 1' ಮೇಲೆ, ಪೂರ್ವ ರೈಲ್ವೆಯ ಮುಖ್ಯ ಮಾರ್ಗದಲ್ಲಿ ಪಾಟ್ನ ನಗರಕ್ಕೆ 55 ಮೈ. ದೂರದಲ್ಲಿ ಫಲ್ಗು ನದಿಯ ಪಶ್ಚಿಮ ದಂಡೆಯ ಉದ್ದಕ್ಕೂ ಬಹುತೇಕ ಹಬ್ಬಿರುವ ಈ ನಗರದ ವಿಸ್ತೀರ್ಣ 11.4 ಚ.ಮೈ. ಜನಸಂಖ್ಯೆ 1,79,826 (1971). ಗಯೆಯ ಸುತ್ತಲೂ ಛೋಟಾನಾಗಪುರ ಪ್ರಸ್ಥಭೂಮಿಯ ಅಂಚಿನ ಬೆಟ್ಟಗಳಿವೆ. ವರ್ಷದಲ್ಲಿ ಬಹುಕಾಲ ಬರಡಾಗಿರುವ ಫಲ್ಗು ನದಿಯ ಮರಳು ಬಿಸಿಲಿನಿಂದ ಕಾಯುವುದರಿಂದ ಗಯಾ ನಗರ ಬಹಳ ಬಿಸಿ. ಗಯಾ ನಗರ ಛೋಟಾನಾಗಪುರ ಪ್ರಸ್ಥಭೂಮಿಯೂ ಗಂಗಾ ನದಿಯ ಬಯಲೂ ಕೂಡುವ ಎಡೆಯಲ್ಲಿರುವುದರಿಂದ ಇದೊಂದು ಮುಖ್ಯ ವ್ಯಾಪಾರ ಕೇಂದ್ರ. ಅಲ್ಲದೆ ಇದೊಂದು ಯಾತ್ರಾಸ್ಥಳ. ವರ್ಷಕ್ಕೆ ಸುಮಾರು ಮೂರು ಲಕ್ಷ ಯಾತ್ರಾರ್ಥಿಗಳು ಗಯಾಕ್ಕೆ ಬರುತ್ತಾರೆ. ಗಯಾ ನಗರದ ಅನೇಕ ದೇವಸ್ಥಾನಗಳಲ್ಲಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಕಟ್ಟಿಸಿದ (1787) ವಿಷ್ಣುಪಾದ ದೇವಸ್ಥಾನ ಮುಖ್ಯವಾದ್ದು. ಈ ಕ್ಷೇತ್ರದ ಒಂದು ಭಾಗವಾದ ಬ್ರಹ್ಮಗಯಾ ಹಿಂದೂಗಳ ಯಾತ್ರಾಸ್ಥಳವಾದರೆ ಇನ್ನೊಂದು ಭಾಗವಾದ ಬೋಧಗಯಾ ವಿಶ್ವದ ಬೌದ್ಧರ ಯಾತ್ರಾಸ್ಥಳ.

	ಬೋಧಗಯಾ : ಬೋಧಗಯಾ ಬ್ರಹ್ಮಗಯಕ್ಕೆ ಏಳು ಮೈಲಿಗಳ ದೂರದಲ್ಲಿದೆ. ಸಮೀಪದಲ್ಲಿಯೇ ಸು. 2,400 ವರ್ಷಗಳಿಗೂ ಹಳೆಯದೆಂದು ಹೇಳಲಾದ ಬೋಧಿವೃಕ್ಷವಿದೆ. ಇಲ್ಲಿಯೇ ಶಾಕ್ಯವಂಶದ ಸಿದ್ದಾರ್ಥ ಆರು ವರ್ಷಗಳ ಕಾಲ ಕಠಿಣ ತಪಸ್ಸನ್ನಾಚರಿಸಿ ತನ್ನ ಮೂವತ್ತೈದನೆಯ ವಯಸ್ಸಿನಲ್ಲಿ ಜ್ಞಾನೋದಯ ಪಡೆದು ಬುದ್ಧನಾದ್ದು. ಬುದ್ಧನ ಸಂದೇಶವನ್ನು ಪಡೆದ ಮೊದಲಿಗರಲ್ಲಿ ಗಯಾ ನಿವಾಸಿಗಳೂ ಸೇರಿದ್ದಾರೆ. ಇಲ್ಲಿಯ ಗುಹೆಯೊಂದರಲ್ಲಿ ಅಶೋಕನ ಶಾಸನವಿದೆ. ಕ್ರಿ. ಶ ಮೂರನೆಯ ಶತಮಾನದಲ್ಲಿ ಇಲ್ಲಿಯ ಬೋಧಿವೃಕ್ಷದ ಸಮೀಪದಲ್ಲಿ ಅಶೋಕ ದೊಡ್ಡ ವಿಹಾರವೊಂದನ್ನು ಕಟ್ಟಿಸಿದ್ದ. ಅದರ ಅವಶೇಷಗಳನ್ನು ಇಂದಿಗೂ ಕಾಣಬಹುದು. ಈಗ ಇಲ್ಲಿರುವ ದೇವಮಂದಿರ 50' ಚೌಕವಾಗಿದ್ದು 160'ಎತ್ತರವಾಗಿದೆ. ಒಳಗಡೆ ಬುದ್ಧನ ದೊಡ್ಡ ವಿಗ್ರಹವಿದೆ. ಮೇಲಿನ ಅಂತಸ್ತಿನಲ್ಲಿ ಮಾಯಾದೇವಿಯ ವಿಗ್ರಹವಿದೆ. 7ನೆಯ ಶತಮಾನದಲ್ಲಿ ಚೀನೀಯಾತ್ರಿಕ ಹ್ಯೂಯೆನ್‍ತ್ಸಾಂಗ್ ಇಲ್ಲಿಗೆ ಬಂದಿದ್ದನೆಂದು ಹೇಳಲಾಗಿದೆ.

	ಬ್ರಹ್ಮಗಯಾ : ಬ್ರಹ್ಮಗಯಾ ಹಿಂದೂಗಳ ಪುಣ್ಯಕ್ಷೇತ್ರ. ಸು. 5ನೆಯ ಶತಮಾನದಿಂದಲೂ ಇದು ಪ್ರಸಿದ್ಧವಾಗಿದೆ. ವೇದಪುರಾಣಗಳಲ್ಲಿ ಗಯಾದ ಉಲ್ಲೇಖವಿರುವುದಾದರೂ ಋಗ್ವೇದದಲ್ಲಿ ಇದು ಒಬ್ಬ ಋಷಿಯ ಹೆಸರು. ಈ ಕ್ಷೇತ್ರದಲ್ಲಿ ಯಾಗವನ್ನು ಕೈಗೊಂಡ ಧಾರ್ಮಿಕ ದೊರೆಯೊಬ್ಬನ ಪ್ರಸ್ತಾಪ ಮಹಾಭಾರತದಲ್ಲಿ ಬಂದಿದೆ. ಈತ ಚಿನ್ನದಿಂದಲೇ ಯಜ್ಞವೇದಿಕೆಯನ್ನು ನಿರ್ಮಿಸಿ ಕೊನೆಯಲ್ಲಿ ಆ ವೇದಿಕೆಯನ್ನು ಬ್ರಾಹ್ಮಣರಿಗೆ ಹಂಚಿಕೊಟ್ಟನೆಂದೂ ಈತ ಅಪಾರವಾಗಿ ಶೇಖರಿಸಿದ್ದ ಘೃತ ಮತ್ತು ಮಧುವನ್ನು ಯಜ್ಞ ಮುಗಿದ ಬಳಿಕ ಅಗ್ನಿಯ ಅನುಗ್ರಹದಿಂದ ಘೃತಕುಲ್ಯಾ ಎಂಬ ಹೆಸರಿನಿಂದ ನದಿಗಳ ರೂಪದಲ್ಲಿ ಹರಿಯಬಿಟ್ಟನೆಂದೂ ಹೇಳಲಾಗಿದೆ.

	ಹುಟ್ಟಿದ ಮಕ್ಕಳಲ್ಲಿ ಒಬ್ಬನಾದರೂ ಗಯಾದಲ್ಲಿ ಶ್ರಾದ್ಧ ಮಾಡಿ ತನ್ನ ತಂದೆಗೆ ಸ್ವರ್ಗ ಪ್ರಾಪ್ತಿಯಾಗುವಂತೆ ಮಾಡಬೇಕೆಂದು ರಾಮಾಯಣದಲ್ಲಿ ಹೇಳಿದೆ. ಈ ಕ್ಷೇತ್ರದಲ್ಲಿ ಶ್ರಾದ್ಧ ನಡೆಸಿದವನ ವಂಶದ ನೂರು ಜನ ಪಿತೃಗಳಿಗಲ್ಲದೆ ಅವನಿಗೂ ಶಾಶ್ವತ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಸ್ಥಳಪುರಾಣ ತಿಳಿಸುತ್ತದೆ. ಈ ನಂಬಿಕೆಗೆ ಹಿನ್ನಲೆಯಾಗಿರುವ ಕಥೆ ಗಯಾ ಮಹಾತ್ಮ್ಯೆಯಲ್ಲಿ ಹೀಗೆ ಬಂದಿದೆ; ವಿಷ್ಣುವಿನ ಪರಮ ಭಕ್ತನಾದ ಗಯನೆಂಬ ಅಸುರ ಒಮ್ಮೆ ಕೋಲಾಹಲ ಪರ್ವತದ ಮೇಲೆ ಕಠಿಣ ತಪಸ್ಸನ್ನಾಚರಿಸಿದ. ಇದರಿಂದ ದೇವತೆಗಳೆಲ್ಲ ಖಿನ್ನರಾಗಿ ವಿಷ್ಣು ಮಹೇಶ್ವರರ ಬಳಿಗೆ ಹೋದರು. ವಿಷ್ಣು ದೇವತೆಗಳೊಡನೆ ಗಯಾಕ್ಕೆ ಬಂದು ಗಯಾ ಪರಿಶುದ್ಧನೆಂಬ ವಿಚಾರ ತಿಳಿದು, ಅವನನ್ನು ಸ್ಪರ್ಶಿಸಿದವರು ವೈಕುಂಠವನ್ನು ಸೇರಲಿ ಎಂಬುದಾಗಿ ವರ ನೀಡಿದ. ಅಂದಿನಿಂದ ಜನ ಗಯನನ್ನು ಸ್ಪರ್ಶಿಸಿ ಸ್ವರ್ಗಲಾಭ ಪಡೆಯತೊಡಗಿದರು. ಇದರಿಂದ ಯಮನ ರಾಜ್ಯ ಬರಿದಾಗಿ ಅವನಿಗೆ ಈ ಕೆಲಸವಿಲ್ಲದಂತಾಯಿತು. ಅನಂತರ ವಿಷ್ಣುವಿನ ಸಲಹೆಯಂತೆ ಬ್ರಹ್ಮ ಗಯನನ್ನು ಸಮೀಪಿಸಿ ಅವನ ಪವಿತ್ರ ದೇಹದ ಮೇಲೆ ಯಾಗ ಮಾಡಬೇಕೆಂಬ ಸಂಕಲ್ಪವನ್ನು ಅವನಲ್ಲಿ ವಿಜ್ಞಾಪನೆ ಮಾಡಿಕೊಂಡ. ಇದಕ್ಕೆ ಗಯ ಮರುಮಾತಾಡದೆ ಸಮ್ಮತಿಯನ್ನಿತ್ತ. ಯಾಗಕರ್ಮಗಳನ್ನು ನಡೆಸಲು ಬ್ರಹ್ಮ ಋತ್ವಿಜರಾಜರಾದ ಮಾನಸಪುತ್ರರನ್ನು ಸೃಷ್ಟಿಸಿದ. ಅವರು ಗಯನ ಶಿರ ಉತ್ತರದ ಕಡೆಗಿರುವಂತೆಯೂ ಪಾದಗಳು ದಕ್ಷಿಣದ ಕಡೆಗಿರುವಂತೆಯೂ ಮಾಡಿ ಅವನ ದೇಹದ ಮೇಲೆ ಯಜ್ಞವನ್ನು ವಿಜೃಂಭಣೆಯಿಂದ ನಡೆಸಿದರು. ಯಜ್ಞಸಮಾರಂಭದ ಕೊನೆಯಲ್ಲಿ ಗಯನ ತಲೆ ಅಲುಗಾಡತೊಡಗಿತು. ವಿಶೇಷವಾದ ಧರ್ಮಶಿಲೆಯೊಂದನ್ನು ತಂದು ಗಯನ ತಲೆಯ ಬಳಿ ಇಡಬೇಕೆಂದು ಆಗ ಬ್ರಹ್ಮ ಯಮನಿಗೆ ಸೂಚಿಸಿದ. ಆದರೂ ಗಯ ನಿಶ್ಚಲನಾಗಲಿಲ್ಲ. ದೇವತೆಗಳೆಲ್ಲ ಶಿಲೆಯ ಬಳಿ ನಿಂತರೂ ತಲೆಯ ಅಲುಗಾಟ ನಿಲ್ಲಲಿಲ್ಲ. ಕೊನೆಗೆ ವಿಷ್ಣುವೇ ಗದಾಧಾರಿಯಾಗಿ ಗಯನ ಶಿರದ ಬಳಿ ಪ್ರತ್ಯಕ್ಷನಾದಾಗ ತಲೆ ಅಲುಗಾಡುವುದು ನಿಂತಿತು. ಮಹಾವಿಷ್ಣುವಿನ ದರ್ಶನ ಲಾಭದಿಂದ ಕೃತಾರ್ಥನಾದ ಗಯ ತನಗೆ ವಿಷ್ಣುವಿನ ಆಜ್ಞೆಯೊಂದೇ ಸಾಕಾಗಿತ್ತೆಂದೂ ಅಷ್ಟು ಜನ ದೇವತೆಗಳು ಚಿತ್ರಹಿಂಸೆ ಕೊಡಬಾರದಾಗಿತ್ತೆಂದು ಭಿನ್ನೈಸಿಕೊಂಡ. ಗಯನ ಭಕ್ತಿಗೆ ಮೆಚ್ಚಿದ ವಿಷ್ಣು ಅವನಿಗೆ ವರಪ್ರಸಾದವನ್ನು ನೀಡಿ ತಾನೇ ಮೊದಲ್ಗೊಂಡು ಸಮಸ್ತ ದೇವತೆಗಳಿಗೂ ಅವನ ಶಿರದ ಬಳಿ ಶಾಶ್ವತವಾಗಿ ನಿಂತಿರುವಂತಾಗಿ ಆ ಸ್ಥಳ ಗಯನ ಹೆಸರಿನಿಂದ ಶೋಭಿಸಲೆಂದು ಅನುಗ್ರಹಿಸಿದ. ಅಂದಿನಿಂದ ಅದು ಗಯಾ ಕ್ಷೇತ್ರವೆಂದು ಪ್ರಸಿದ್ಧವಾಯಿತು.					(ಸಿ.ಕೆ.ವೈ.ಡಿ; ಜಿ.ಎಚ್.) 	

	ಭಾರತ ಭಾಗವತಾದಿಗಳಲ್ಲೆಲ್ಲಿಯೂ ಕಾಣದ, ಜನನಿತವಾದ, ಗಯೋಪಾಖ್ಯಾನವೆಂಬ ಹೆಸರಿನ ಒಂದು ಕಥೆಯಿದೆ. ಈ ಕಥೆಯ ವಿವರಗಳು ಹೀಗಿವೆ; ಶಿವಭಕ್ತ ಸಂಪನ್ನನಾದ ಗಯನೆಂಬ ಒಬ್ಬ ಗಂಧರ್ವ ಒಮ್ಮೆ ಶಿವಪೂಜೆಗಾಗಿ ಕೈಲಾಸಕ್ಕೆ ಹೋಗಿ ಮಡದಿಮಕ್ಕಳೊಂದಿಗೆ ಹಿಂದಿರುಗಿ ವಿಮಾನದಲ್ಲಿ ಕುಳಿತು ಬರುವಾಗ ಬಾಯ ತಂಬುಲವನ್ನು ಉಗುಳಿದ. ಸೂರ್ಯನಿಗೆ ಅಘ್ರ್ಯವನ್ನು ಕೊಡುತ್ತ ಕಣ್ಮುಚ್ಚಿ ನಿಂತಿದ್ದ ಶ್ರೀಕೃಷ್ಣನ ಬೊಗಸೆಯಲ್ಲಿ ಅದು ಬಿತ್ತು. ಕೈಲಿದ್ದ ನೀರು ಕೆಂಪಾಗಿದ್ದುದನ್ನು ಕಂಡು ಕೋಪಗೊಂಡ ಕೃಷ್ಣ ಆ ಅಪರಾಧ ಎಸಗಿದವನನ್ನು ಕೊಲ್ಲದೆ ಬಿಡುವುದಿಲ್ಲವೆಂದು ಪ್ರತಿಜ್ಞೆಮಾಡಿದ. ಇದರಿಂದ ಭೀತಿಗೊಂಡ ಗಯ ದೇವತೆಗಳಲ್ಲಿ ಮೊರೆಯಿಟ್ಟ. ಯಾರೂ ಅಭಯ ನೀಡಲಿಲ್ಲ. ಕೊನೆಗೆ ನಾರದರ ಸೂಚನೆಯ ಮೇರೆಗೆ ಅರ್ಜುನನ ಮರೆಹೊಕ್ಕ. ಅರ್ಜುನ ಹಿಂದುಮುಂದು ನೋಡದೆ ಅಭಯಪ್ರದಾನ ಮಾಡಿದ. ಅನಂತರ ವಿಷಯ ತಿಳಿದು ತನ್ನ ಅವಿವೇಕವನ್ನು ಕಂಡು ವಿಷಾದಿಸಿದ. ಕಡೆಗೆ ಮೊರೆಹೊಕ್ಕವರನ್ನು ಕಾಪಾಡಬೇಕೆಂಬ ಧರ್ಮಕ್ಕೆ ಕಟ್ಟುಬಿದ್ದು ಗಯನಿಗಾಗಿ ಅರ್ಜುನ ಕೃಷ್ಣನನ್ನು ಇದಿರಿಸಿ ಯುದ್ಧದಲ್ಲಿ ತೊಡಗಿದ. ಆಗ ದೇವತೆಗಳು ಮಧ್ಯೆ ಪ್ರವೇಶಿಸಿ ಗಯನನ್ನು ಶ್ರೀಕೃಷ್ಣನ ಚರಣಗಳಿಗೆ ಅಡ್ಡಬೀಳಿಸಿ ಕೃಷ್ಣನಿಂದಲೇ ಗಯನಿಗೆ ಅಭಯಪ್ರದಾನ ಮಾಡಿಸಿದರು.

	ಭಾರತದ ಎಲ್ಲ ಕಡೆಗಳಿಂದಲೂ ಹಿಂದುಗಳು ಗಯಾಕ್ಕೆ ಹೋಗಿ ಫಲ್ಗು ನದಿಯಲ್ಲಿ ಸ್ನಾನ ಮಾಡಿ ಪಿತೃಗಳಿಗೆ ತರ್ಪಣವನ್ನೂ ಪಿಂಡವನ್ನೂ ಅರ್ಪಿಸಿ ವಿಷ್ಣುಪಾದೋದಕವನ್ನು ಪ್ರೋಕ್ಷಿಸಿಕೊಳ್ಳುವ ಪದ್ಧತಿ ಬಹು ಹಿಂದಿನಿಂದ ನಡೆದುಬಂದಿದೆ. ಈ ಕ್ಷೇತ್ರದ ಮುಖ್ಯಸ್ಥರು ಇಲ್ಲಿ ಸಂಸ್ಕಾರ ನಡೆಸಿದವರ ಹೆಸರು ಕುಲಗೋತ್ರಗಳನ್ನು ಹಿಂದಿನಿಂದಲೂ ಬರೆದು ಇಟ್ಟಿದ್ದಾರೆ.

	ಈ ಕ್ಷೇತ್ರದ ಯಾತ್ರೆ ಪೂರ್ಣವಾಗಬೇಕಾದರೆ ಸಮೀಪದಲ್ಲಿರುವ ಐದು ಸ್ಥಳಗಳಿಗೆ ಹೋಗಿ ಅಲ್ಲಿಯ ಯಮದೇವತೆಗೂ ಆತನ ದೂತನಿಗೂ ಪೂಜೆ ಸಲ್ಲಿಸಬೇಕು. ಇವುಗಳಲ್ಲಿ ಮುಖ್ಯವಾದವು ರಾಮಶಿಲಾ ಮತ್ತು ಪ್ರೇತಶಿಲಾ ಗುಡ್ಡಗಳು. ಪ್ರೇತಶಿಲಾದಲ್ಲಿ ಯಮನನ್ನು ಪ್ರಾರ್ಥಿಸಿಯಾದ ಮೇಲೆ ಪಿತೃಯಾನದ ಕಾವಲು ನಾಯಿಗಳಿಗೂ ಪೂಜೆ ಸಲ್ಲಿಸುವುದು ವಾಡಿಕೆ.							(ಸಿ.ಕೆ.ವೈ.ಡಿ;ಜಿ.ಎಚ್.)
 ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ